ಕರ್ಣಾಟಕ ಬ್ಯಾಂಕ್ - ಕರ್ಣಾಟಕದ ಹೆಮ್ಮೆಯ ಬ್ಯಾಂಕ್
ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ರೈತಾಪಿ ವರ್ಗ, ಸಣ್ಣ ವ್ಯಾಪಾರಸ್ಥರು, ವಿದ್ಯಾರ್ಥಿಗಳು ಹೀಗೆ ಅವಶ್ಯಕ ವರ್ಗಗಳ ಅಭಿವೃದ್ಧಿಗೆ ಪೂರಕವಾಗುವಂತೆ ಬ್ಯಾಂಕಿಂಗ್ ಸಂಸ್ಥೆಯೊಂದನ್ನು ಹುಟ್ಟು ಹಾಕಲು ಜಿಲ್ಲೆಯ ದ್ರಾವಿಡ ಬ್ರಾಹ್ಮಣ ಸಮುದಾಯದ ಪ್ರಮುಖ ಕೃಷಿಕರು, ವಕೀಲರು ಮತ್ತು ವ್ಯಾಪಾರಸ್ಥರ ಗುಂಪೊಂದು ನಿರ್ಧರಿಸಿತು. ಮದ್ರಾಸ್ ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಡಾ.ಯು.ರಾಮರಾವ್ ಇವರ ನೇತೃತ್ವದಲ್ಲಿ ಬ್ಯಾಂಕಿಂಗ್ ಸಂಸ್ಥೆಯೊಂದನ್ನು ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಯಿತು. ಸಭೆಯ ನಿರ್ಧಾರವನ್ನು ಫೆಬ್ರವರಿ 18, 1924ರಂದು ಜಿಲ್ಲೆಯ ಕಿರಿಯ ಕಂಪೆನಿ ನೋಂದಣಿ ಅಧಿಕಾರಿಗಳಿಂದ ಸ್ಥಾಪನಾ ದೃಢೀಕರಣ ಪತ್ರವೊಂದನ್ನು (Certification of Incorporation) ಪಡೆಯುವ ಮೂಲಕ ಕಾರ್ಯಗತಗೊಳಿಸಿ ಆ ಸಂಸ್ಥೆಗೆ "ದಿ ಕರ್ಣಾಟಕ ಬ್ಯಾಂಕ್ ಲಿಮಿಟೆಡ್" ಎಂದು ನಾಮಕರಣ ಮಾಡಲಾಯಿತು.
ಶ್ರೀ ನೆಲ್ಲಿಕಾಯಿ ವೆಂಕಟರಾವ್, ಶ್ರೀ ಪೇಜಾವರ ನಾರಾಯಣಾಚಾರ್ಯ, ಶ್ರೀ ಕಲ್ಮಾಡಿ ಲಕ್ಷ್ಮಿನಾರಾಯಣ ರಾವ್,
ಶ್ರೀ ಬಿ.ಆರ್. ವ್ಯಾಸರಾಯ ಆಚಾರ್, ಶ್ರೀ ಪಾಂಗಾಳ ಸುಬ್ಬರಾವ್ , ಶ್ರೀ ಉಡುಪಿ ವೆಂಕಟರಾವ್, ಶ್ರೀ ಶೇಷ ಭಟ್ ಭಿಡೆ,
ಶ್ರೀ ನರಿಕೊಂಬು ರಾಮರಾವ್, ಶ್ರೀ ಕಕ್ಕುಂಜೆ ಸದಾಶಿವ ಅಡಿಗ ಈ ಒಂಬತ್ತು ಮಹನೀಯರು ಬ್ಯಾಂಕಿನ ಸ್ಥಾಪಕ ನಿರ್ದೇಶಕರಾಗಿದ್ದರು. ಬ್ಯಾಂಕಿನ ಸ್ಥಾಪಕ ಅಧ್ಯಕ್ಷರಾಗಿ ಶ್ರೀ ಬಿ.ಆರ್. ವ್ಯಾಸರಾಯ ಆಚಾರ್ ಇವರು ಕಾರ್ಯ ನಿರ್ವಹಿಸಿದರು. ಶ್ರೀ ಪಿ.ವಾಸುದೇವರಾಯರು ಬ್ಯಾಂಕಿನ ಮೊದಲ ಕಾನೂನು ಸಲಹೆಗಾರರಾಗಿ ನಿಯುಕ್ತಿಗೊಂಡರು. ಲೆಕ್ಕಪರಿಶೋಧಕರಾಗಿ ಮದ್ರಾಸಿನ ಶ್ರೀ ಎಂ.ಕೆ. ದಾಂಡೇಕರ್ ಹಾಗೂ ಬ್ಯಾಂಕಿನ ಪ್ರಥಮ ಕಾರ್ಯದರ್ಶಿಯಾಗಿ ಶ್ರೀ ಪಾಂಗಾಳ ರಾಮಚಂದ್ರರಾಯರು ಆಯ್ಕೆಯಾದರು. ಬ್ಯಾಂಕ್ ತನ್ನ ವ್ಯವಹಾರವನ್ನು ಮೇ 23, 1924ರಂದು ಮಂಗಳೂರಿನ ಡೊಂಗರಕೇರಿಯಲ್ಲಿ ಪ್ರಥಮ ಶಾಖೆಯನ್ನು ತೆರೆಯುವುದರೊಂದಿಗೆ ಯಶಸ್ವಿಯಾಗಿ ಪ್ರಾರಂಭಿಸಿತು.
1945ನೇ ಇಸವಿಯಲ್ಲಿ ಶ್ರೀ ಕಕ್ಕುಂಜೆ ಸೂರ್ಯನಾರಾಯಣ ಅಡಿಗರು ಬ್ಯಾಂಕಿನ ನಿರ್ದೇಶಕ ಮಂಡಳಿಗೆ ಸೇರ್ಪಡೆಯಾದರು. ಶ್ರೀ ಬಿ.ಆರ್.ವ್ಯಾಸರಾಯ ಆಚಾರ್ ರವರು ಬ್ಯಾಂಕಿನ ಅಧ್ಯಕ್ಷರಾಗಿ ತಮ್ಮ 34 ವರ್ಷಗಳ ಸುದೀರ್ಘ ಸೇವೆಯ ಅನಂತರ 1958ರಲ್ಲಿ ನಿವೃತ್ತರಾದರು. ಅನಂತರ ಶ್ರೀ ಅಡಿಗರು ಬ್ಯಾಂಕಿನ ಅಂದಿನ ನಿಯಮಗಳಿಗೆ ಅನುಗುಣವಾಗಿ ಬ್ಯಾಂಕಿನ ಅಂಶಕಾಲಿಕ ಅಧ್ಯಕ್ಷರಾದರು.
ಬ್ಯಾಂಕಿನ ವಜ್ರಮಹೋತ್ಸವ ವರ್ಷವನ್ನು 1984ರಲ್ಲಿ ಆಚರಿಸಲಾಯಿತು. ಬ್ಯಾಂಕಿನ ಗೃಹಪತ್ರಿಕೆ ‘ಅಭ್ಯುದಯ’ವನ್ನು ಇದೇ ವರ್ಷ ಪ್ರಾರಂಭಿಸಲಾಯಿತು. ಇದರಿಂದ ಬ್ಯಾಂಕಿನ ಸಿಬ್ಬಂದಿ ನಡುವೆ ಆಂತರಿಕ ಸಂವಹನ ಮತ್ತು ಅವರಲ್ಲಿನ ಸಾಹಿತ್ಯಿಕ ಪ್ರತಿಭೆಗೆ ಹೊಸ ಅವಕಾಶ ಒದಗಿತು.
“ಹೊಸ ಚಿಗುರು ಹಳೇ ಬೇರು ಕೂಡಿರಲು ಮರ ಸೊಬಗು" ಎನ್ನುವಂತೆ, ಕರ್ಣಾಟಕ ಬ್ಯಾಂಕ್ 2000ನೇ ಇಸವಿಯ ಕೊನೆಯ ತ್ರೈಮಾಸಿಕದಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ಕೋರ್ ಬ್ಯಾಂಕಿಂಗ್ ಸೊಲ್ಯುಶನ್ (CBS) ಅಳವಡಿಸಿ ಖಾಸಗಿ ರಂಗದ ಬ್ಯಾಂಕುಗಳಲ್ಲಿ ಪ್ರಥಮವಾಗಿ ಕೋರ್ ಬ್ಯಾಂಕಿಂಗ್ ಸೊಲ್ಯುಶನ್ ಹೊಂದಿದ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
1995 ರಿಂದ ಶ್ರೀ ಎಂ.ಎಸ್. ಕೃಷ್ಣ ಭಟ್ಟರ ನೇತೃತ್ವವು ಬ್ಯಾಂಕಿನ ಅಭಿವೃದ್ಧಿಯ ನವ ಮನ್ವಂತರಕ್ಕೆ ನಾಂದಿಯಾಯಿತು. ಜುಲೈ 2000ಕ್ಕೆ ಅವರ ಸಾರ್ಥಕ ಅಧ್ಯಕ್ಷತೆ ಸಂಪನ್ನಗೊಂಡ ನಂತರ, ಶ್ರೀ ಅನಂತಕೃಷ್ಣರವರು ಬ್ಯಾಂಕಿನ ಅಧ್ಯಕ್ಷರಾಗಿ ಸಾರಥ್ಯ ವಹಿಸಿದರು. ಇವರ ಅವಿಚ್ಛಿನ್ನ ಒಂಭತ್ತು ವರ್ಷಗಳ ಅಧ್ಯಕ್ಷತೆಯಲ್ಲಿ ಬ್ಯಾಂಕಿನ ಒಟ್ಟು ವ್ಯವಹಾರ ರೂ. 7,165 ಕೋಟಿಗಳಿಂದ ರೂ. 32,034 ಕೋಟಿಗಳನ್ನು ತಲುಪಿತು. ಇವರು ಅಧಿಕಾರ ವಹಿಸಿಕೊಂಡಾಗ ಇದ್ದ ಶಾಖೆಗಳ ಸಂಖ್ಯೆ 350. ಅಧ್ಯಕ್ಷತೆಯಿಂದ ನಿರ್ಗಮಿಸುವಾಗ ಶಾಖೆಗಳ ಸಂಖ್ಯೆ 449ಕ್ಕೆ ತಲುಪಿತು.
ಶ್ರೀ ಅನಂತಕೃಷ್ಣರ ಒಂಭತ್ತು ವರ್ಷಗಳ ಸಾರ್ಥಕ ಸೇವೆಯ ಅನಂತರ ಬ್ಯಾಂಕಿನ ಆಡಳಿತವನ್ನು ವಹಿಸಿದವರು ಸರಳತೆ ಹಾಗೂ ಸಜ್ಜನಿಕೆಗೆ ಹೆಸರಾದ ಶ್ರೀ ಪಿ. ಜಯರಾಮ ಭಟ್ ಅವರು. ಶ್ರೀಯುತರು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕರು ಹಾಗೂ ಕಾರ್ಯ ನಿರ್ವಹಣಾಧಿಕಾರಿಗಳಾಗಿ 2009ರ ಜುಲೈ ತಿಂಗಳಲ್ಲಿ ನೇಮಕವಾದರು. ಇವರು ಅಧಿಕಾರ ವಹಿಸಿಕೊಂಡಾಗ ಬ್ಯಾಂಕಿನ ಒಟ್ಟು ವಹಿವಾಟು ರೂ.32,034 ಕೋಟಿ. ಸದಾ ಮಂದಸ್ಮಿತರಾಗಿ ಅಪಾರ ಜನಪ್ರಿಯರಾಗಿ, ಜನಾನುರಾಗಿಯಾಗಿ ಬ್ಯಾಂಕನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ ಶ್ರೀ ಪಿ.ಜಯರಾಮ ಭಟ್, ಏಪ್ರಿಲ್ 2017ರ ವರೆಗೆ ಆಡಳಿತ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಬ್ಯಾಂಕಿನ ವ್ಯವಹಾರ ರೂ 93,843 ಕೋಟಿಗೆ ತಲುಪುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತೆಯೇ ಶಾಖೆಗಳ ಸಂಖ್ಯೆಯೂ 765 ಕ್ಕೆ ಏರಿತು. ಇವರ ಅನಂತರ 2017 ರಲ್ಲಿ ಶ್ರೀ ಮಹಾಬಲೇಶ್ವರ ಎಂ.ಎಸ್ ಅವರು ಬ್ಯಾಂಕಿನ ಎಂ.ಡಿ ಹಾಗೂ ಸಿ.ಇ.ಒ ಆಗಿ ಬ್ಯಾಂಕನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಶ್ರೀ ಪಿ.ಜಯರಾಮ ಭಟ್ ಇವರು ಬ್ಯಾಂಕಿನ ನಾನ್ಎಕ್ಸಿಕ್ಯೂಟಿವ್ ಚೇರ್ಮೆನ್ ಆಗಿ ನಿಯುಕ್ತಿಗೊಂಡು ಬ್ಯಾಂಕಿನ ಅಭಿವೃದ್ಧಿಗೆ ನೇಪಥ್ಯದಲ್ಲಿ ಬೆಂಬಲವಾಗಿ ನಿಂತರು.
ಪ್ರಸಕ್ತ ಬ್ಯಾಂಕಿನ ಎಂ.ಡಿ ಹಾಗೂ ಸಿ.ಇ.ಒ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಮಹಾಬಲೇಶ್ವರ ಎಂ.ಎಸ್ ಅವರು ಅಪಾರ ಕ್ರಿಯಾಶೀಲ ವ್ಯಕ್ತಿ. ಬ್ಯಾಂಕಿನ ಏಳ್ಗೆಗಾಗಿ ಉನ್ನತ ಕನಸುಗಳನ್ನು ಹೊಂದಿರುವ ಇವರು ತಮ್ಮ ಸಮರ್ಥ ನಾಯಕತ್ವದಿಂದ ಬ್ಯಾಂಕಿಗೊಂದು ಹೊಸ ಆಯಾಮವನ್ನು ನೀಡಲು "KBL-VIKAAS" ಎಂಬ ಸಮಗ್ರ ಪರಿವರ್ತನೆಯ ಯೋಜನೆಯನ್ನು ಜಾರಿಗೊಳಿಸಿ ಬ್ಯಾಂಕಿನ ಪ್ರಸಕ್ತ ಶತಮಾನದ ಪರಿವರ್ತನೆಯ ಹರಿಕಾರರಾಗಿ ದುಡಿಯುತ್ತಿದ್ದಾರೆ. 8412 ಮಿಕ್ಕಿ ಇರುವ ಬ್ಯಾಂಕಿನ ಸಿಬ್ಬಂದಿವರ್ಗ ಶ್ರೀಯುತರ ಆಶಯದಂತೆ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಕರ್ಣಾಟಕ ಬ್ಯಾಂಕು ಇಂದು 22 ರಾಜ್ಯಗಳಲ್ಲಿ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ತನ್ನ 859 ಶಾಖೆ, 1016 ಎಟಿಎಂಗಳು, 471 ಕ್ಯಾಶ್ ರಿಸೈಕ್ಲರ್ ಗಳು, 37 ಇ-ಲಾಬಿ ಹಾಗೂ 421 ಮಿನಿ ಇ-ಲಾಬಿಗಳನ್ನು ಹೊಂದಿದೆ. ಸುಮಾರು 111.21 ಲಕ್ಷ ಸಂತೃಪ್ತ ಗ್ರಾಹಕರನ್ನು ಹೊಂದಿ ದೇಶದ ಆರ್ಥಿಕತೆಗೆ ಹಾಗೂ ತನ್ಮೂಲಕ ಜನಸಮೂಹಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತಲಿದೆ. ಅಂತೆಯೇ ಬ್ಯಾಂಕಿನ ಒಟ್ಟು ವ್ಯವಹಾರ ಈಗಾಗಲೇ ರೂ 1,27,028 ಕೋಟಿಯ ಗಡಿಯನ್ನು ತಲುಪಿದೆ.
ಡಿಜಿಟಲ್ ಕ್ರಾಂತಿಯ ಈ ಕಾಲಘಟ್ಟದಲ್ಲಿ ಬ್ಯಾಂಕಿಂಗ್ ಪರಿಭಾಷೆಯೇ ಬದಲಾಗುತ್ತಿದೆ. ಈ ಕ್ಷಿಪ್ರ ಸ್ಥಿತ್ಯಂತರಕ್ಕೆ ಶೀಘ್ರವಾಗಿ ಸ್ಪಂದಿಸುವಲ್ಲಿ ಕರ್ಣಾಟಕ ಬ್ಯಾಂಕು ಮೊದಲಿಗನೆನಿಸಿದೆ. ಕರ್ಣಾಟಕ ಬ್ಯಾಂಕು ಈಗ ಡಿಜಿಟಲೀಕರಣದಿಂದ ಸಂಪನ್ನವಾಗಿರುವ ಪರ್ಯಾಯ ಸೇವೆಗಳನ್ನು ಗ್ರಾಹಕರಿಗೆ ಅರ್ಪಿಸುವಲ್ಲಿ ಮುಂಚೂಣಿಯಲ್ಲಿದೆ. ಅಂತೆಯೇ ಗ್ರಾಹಕರ ಸಾಲ ಸೌಲಭ್ಯಗಳನ್ನೂ ಡಿಜಿಟಲೀಕರಣ ಗೊಳಿಸಿದ ಸಾಧನೆ ಕರ್ಣಾಟಕ ಬ್ಯಾಂಕಿಗೆ ಹೆಮ್ಮೆಯೆನಿಸುತ್ತಿದೆ.
ಗ್ರಾಹಕರ ಅಗತ್ಯಗಳನ್ನು ಮನಗಂಡು ಒಂದೇ ಸೂರಿನಡಿಯಲ್ಲಿ ಅವೆಲ್ಲವನ್ನೂ ಒದಗಿಸುವ ನಿಟ್ಟಿನಲ್ಲಿ ಬ್ಯಾಂಕು ಹಲವಾರು ಇನ್ಶುರೆನ್ಸ್ ಪ್ರೋಡಕ್ಟ್ ಗಳನ್ನು ಗ್ರಾಹಕರಿಗೆ ಪರಿಚಯಿಸಿದೆ. ಆದ್ಯತಾ ವಲಯಗಳಿಗೆ, ಕೃಷಿರಂಗಕ್ಕೆ ಹಾಗೂ ವಿದೇಶಿ ವಿನಿಮಯದಂತಹ ಕ್ಷೇತ್ರಗಳಿಗೂ ಕೂಡ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ. ಸಾಮಾಜಿಕ ಕಳಕಳಿಯ ಆಶಯದೊಂದಿಗೆ ಸ್ಥಾಪಿತವಾದ ಕರ್ಣಾಟಕ ಬ್ಯಾಂಕು ನಿರಂತರವಾಗಿ ಸಮಾಜ ಸೇವೆಯನ್ನು ಮಾಡುತ್ತಲೇ ಬಂದಿದೆ. ಬ್ಯಾಂಕು, ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ ಅಡಿಯಲ್ಲಿ (CSR) ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಲಿದೆ. ಸ್ವಚ್ಛ ಭಾರತ ಅಭಿಯಾನ, ಪರಿಸರ ಸಂರಕ್ಷಣೆ, ಪಾರಂಪರಿಕ ತಾಣಗಳ ರಕ್ಷಣೆ, ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ, ನವೀಕರಿಸಬಹುದಾದ ಶಕ್ತಿಗಳ ಸಂಚಯನಕ್ಕೆ ನೆರವು, ಶಾಲಾ ಕಾಲೇಜುಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆ, ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಶಾಲೆಗಳಿಗೆ ವಾಹನಗಳ ಸೌಲಭ್ಯ, ಸೌರ ವಿದ್ಯುತ್ ಶಕ್ತಿಯ ಬಳಕೆಗೆ ನೆರವು, ಆರೋಗ್ಯ ಕ್ಷೇತ್ರಗಳಿಗೆ ಸಹಾಯ ಹಸ್ತ, ನಾಡಿನ ಗ್ರಾಮೀಣ ವಿಭಾಗಗಳಲ್ಲಿ ಸೌರ ವಿದ್ಯುತ್ ದೀಪಗಳ ಅಳವಡಿಕೆ, ವನ್ಯ ಸಂರಕ್ಷಣೆ, ಕೆರೆಗಳ ಪುನರುಜ್ಜೀವನ, ಮಳೆ ಕೊಯ್ಲು ಘಟಕಗಳ ಅನುಷ್ಠಾನ, ಕಲೆ, ಸಂಸ್ಕೃತಿಗಳಿಗೆ ಸಹಾಯ, ಇಂತಹ ಹತ್ತು ಹಲವಾರು ವಿಭಿನ್ನ ಕ್ಷೇತ್ರಗಳಲ್ಲಿ ಬ್ಯಾಂಕು ವಿಶೇಷ ನೆರವನ್ನು ನೀಡುತ್ತಾ ಇತರರಿಗೆ ಮಾದರಿ ಎನಿಸಿದೆ. ನಾಡಿನ ಕೆಲವು ಜಿಲ್ಲೆಗಳಲ್ಲಿ "ಮನೆ ಬೆಳಕು'' ಎಂಬ ಕಾರ್ಯಕ್ರಮದಡಿಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಮಕ್ಕಳ ಮನೆಗಳಿಗೆ ಸೌರವಿದ್ಯುತ್ ದೀಪಗಳನ್ನು ಒದಗಿಸಿ ವಿದ್ಯಾರ್ಥಿಗಳ ಬಾಳನ್ನು ಬೆಳಗಿದೆ. ಇದು ಅಪಾರ ಜನಮನ್ನಣೆಯನ್ನು ಪಡೆದಿದೆ.
ಹೀಗೆ ಕರ್ನಾಟಕದಲ್ಲಿ ಉದಯಿಸಿ ದೇಶಾದ್ಯಂತ ಮನೆಮಾತಾಗಿರುವ, ಗ್ರಾಹಕರ ಅಚ್ಚು ಮೆಚ್ಚಿನ ಕರ್ಣಾಟಕ ಬ್ಯಾಂಕ್, ತನ್ನ ಸ್ಥಾಪಕರ ಆಶಯಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಾ, ಶತಮಾನೋತ್ಸವದತ್ತ ದಾಪುಗಾಲು ಹಾಕುತ್ತಿರುವ ಕರ್ನಾಟಕದ ಹೆಮ್ಮೆಯ ಬ್ಯಾಂಕ್; 'ನಿಮ್ಮ ಕುಟುಂಬದ ಬ್ಯಾಂಕ್ - ಭಾರತದಾದ್ಯಂತ'.
.
ನವೆಂಬರ್ 2020
ಪ್ರಧಾನ ಕಛೇರಿ:
ಮಹಾವೀರ ವೃತ್ತ, ಕಂಕನಾಡಿ, ಮಂಗಳೂರು - 575 002
ದೂರವಾಣಿ : 0824-2228222
ಇಮೈಲ್ : info@ktkbank.com
ಬ್ಯಾಂಕ್ ಅಂತರ್ಜಾಲ ತಾಣ : www.karnatakabank.com
|